ಸುಖ

ಜನವರಿ ೨೦೦೦ದಲ್ಲಿ ಸ್ವಿಟ್ಜರ್ಲ್ಯಾಂಡಿನ ದಾವೋಸ್ ನಲ್ಲಿ ವಿಶ್ವ ಆರ್ಥಿಕ ವೇದಿಕೆಯಲ್ಲಿ “ಈಸ್ ದಿಸ್ ಆಲ್ ದೇರ್ ಈಸ್? ದ ಮೀನಿಂಗ್ ಆಫ್ ಹ್ಯಾಪಿನೆಸ್” ಎಂಬ ಶೀರ್ಷಿಕೆಯಲ್ಲಿ ಗೋಯಂಕಾಜಿಯವರು ಮಾಡಿದ ಭಾಷಣ.

ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ಈ ಭೂಮಿಯ ಮೇಲಿನ ಅಸಾಧಾರಣ ವ್ಯಕ್ತಿಗಳ ಗುಂಪಿಗೆ ಸೇರಿದವರಾಗಿದ್ದಾರೆ. ಸಾಮಾನ್ಯವಾಗಿ ಅವರು ಶ್ರೀಮಂತರಲ್ಲಿ ಶ್ರೀಮಂತರು, ಅತ್ಯಂತ ಹೆಚ್ಚು ಪ್ರಬಲರು, ಮತ್ತು ವಿಶ್ವದಲ್ಲಿಯೇ ಹೆಚ್ಚು ಸಾಧನೆಗೈದ ವ್ಯಕ್ತಿಗಳು. ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸಲು ಆಹ್ವಾನಿಸಿರುವುದೇ, ತನ್ನ ಸಮಾನ ವರ್ಗದಲ್ಲಿ ಈ ಪ್ರತಿಯೊಬ್ಬ ವ್ಯಕ್ತಿಯು ತಲುಪಿರುವ ವಿಶೇಷ ಸ್ಥಾನಮಾನದ ಮನ್ನಣೆಯಾಗಿದೆ.

ಯಾವುದೇ ಒಬ್ಬ ವ್ಯಕ್ತಿಯು ತಾನು ಬಯಸಿದ ಎಲ್ಲಾ ಸಂಪತ್ತು, ಅಧಿಕಾರ ಮತ್ತು ಅಂತಸ್ತನ್ನು ಹೊಂದಿದ್ದರೂ, ಅವನು ನಿಜವಾಗಿಯೂ ಸುಖವಾಗಿದ್ದಾನೆಯೇ? ಈ ಎಲ್ಲಾ ಸಾಧನೆಗಳು ಮತ್ತು ಅವುಗಳು ತರುವ ಸ್ವಯಂತೃಪ್ತಿ ‘ಇವಿಷ್ಟೇನಾ ಇರುವುದು’? ಅಥವಾ ಹೆಚ್ಚಿನ ಮಟ್ಟದ ಸುಖ ಇದೆಯೇ ಮತ್ತು ಅದನ್ನು ಸಾಧಿಸಲು ಸಾಧ್ಯವೇ?

ಸುಖ ಎನ್ನುವುದು ಒಂದು ಅಲ್ಪಕಾಲಿಕ ಸ್ಥಿತಿ. ಅದು ಬಹಳ ಬೇಗ ಹೊರಟು ಹೋಗುತ್ತದೆ; ಒಂದು ಕ್ಷಣ ಇರುತ್ತದೆ , ಮುಂದಿನ ಕ್ಷಣದಲ್ಲಿ ಹೊರಟು ಹೋಗಿರುತ್ತದೆ. ನಿಮ್ಮ ವ್ಯಾಪಾರದಲ್ಲಿ, ನಿಮ್ಮ ಬ್ಯಾಂಕ್ ಖಾತೆ ಮತ್ತು ನಿಮ್ಮ ಕುಟುಂಬದಲ್ಲಿ ಏನೂ ಸಮಸ್ಯೆ ಇಲ್ಲದಿರುವ ದಿನ ಸಂತೋಷವಿರುತ್ತದೆ. ಆದರೆ ಇಷ್ಟವಿಲ್ಲದಿರುವ ಯಾವುದೋ ಒಂದು ಘಟನೆ ನಡೆದಾಗ ಏನಾಗುತ್ತದೆ? ನಿಮ್ಮ ಸಂತೋಷ ಮತ್ತು ಸಾಮರಸ್ಯವನ್ನು ಭಂಗಗೊಳಿಸಲು, ಸಂಪೂರ್ಣವಾಗಿ ನಿಮ್ಮ ನಿಯಂತ್ರಣದಲ್ಲಿಲ್ಲದಿರುವ ಘಟನೆ ನಡೆದಾಗ ಏನಾಗುತ್ತದೆ?

ತನ್ನ ಅಧಿಕಾರ ಮತ್ತು ಸ್ಥಾನಮಾನಗಳ ಹೊರತಾಗಿಯೂ, ತನಗಿಷ್ಟವಿಲ್ಲದೇ ಇರುವ ಮತ್ತು ತನ್ನ ನಿಯಂತ್ರಣದಲ್ಲಿ ಇಲ್ಲದೇ ಇರುವ ಸಂದರ್ಭಗಳು ಬರುವುದನ್ನು ಪ್ರಪಂಚದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಅನುಭವಿಸುತ್ತಾನೆ. ಅದು ನೀವು ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದೀರಿ ಎಂಬುದನ್ನು ಕಂಡುಹಿಡಿದಿರಬಹುದು; ಅದು ಹತ್ತಿರದ ಮತ್ತು ಪ್ರೀತಿಪಾತ್ರ ವ್ಯಕ್ತಿಯ ಕಾಯಿಲೆ ಅಥವಾ ಸಾವು ಆಗಿರಬಹುದು; ಅದು ವಿವಾಹ ವಿಚ್ಛೇದನ ಆಗಿರಬಹುದು ಅಥವಾ ನಿಮ್ಮ ಬಾಳ ಸಂಗಾತಿಯು ನಿಮಗೆ ಮೋಸ ಮಾಡುತ್ತಿರುವ ವಿಷಯ ಬೆಳಕಿಗೆ ಬಂದದ್ದಾಗಿರಬಹುದು. ಜೀವನದಲ್ಲಿ ಯಶಸ್ಸು ಎಂಬ ಚಟಕ್ಕೆ ಬಲಿಯಾದ ಜನರಿಗೆ, ಅದು ಯಾವುದೋ ಒಂದರಲ್ಲಿ ಆದ ಒಂದು ಸರಳ ವಿಫಲತೆಯಾಗಿರಬಹುದು: ವ್ಯಾಪಾರದ ಒಂದು ಕೆಟ್ಟ ತೀರ್ಮಾನ, ನಿಮ್ಮ ಕಂಪನಿಯನ್ನು ಬೇರೆಯವರು ಸ್ವಾಧೀನಪಡಿಸಿಕೊಂಡಿದ್ದರಿಂದ ನೀವು ಕೆಲಸ ಕಳೆದುಕೊಳ್ಳುವುದು, ರಾಜಕೀಯ ಚುನಾವಣೆಯಲ್ಲಿ ಸೋಲು, ನೀವು ಬಯಸಿದ್ದ ಬಡ್ತಿಯನ್ನು ಬೇರೊಬ್ಬರು ಪಡೆದುಕೊಳ್ಳುವುದು, ಅಥವಾ ನಿಮ್ಮ ಮಗು ಮನೆಬಿಟ್ಟು ಓಡಿಹೋಗುವುದು ಅಥವಾ ನಿಮ್ಮ ವಿರುದ್ಧ ತಿರುಗಿ ಬೀಳುವುದು ಮತ್ತು ನಿಮಗೆ ಪ್ರಿಯವಾದ ಮೌಲ್ಯಗಳನ್ನು ತಿರಸ್ಕರಿಸುವುದು. ನೀವು ಎಷ್ಟೇ ಸಂಪತ್ತು, ಗೌರವ ಮತ್ತು ಅಧಿಕಾರ ಹೊಂದಿರಬಹುದು, ಇಂತಹ ಇಷ್ಟವಿಲ್ಲದ ಘಟನೆಗಳು ಮತ್ತು ವಿಫಲತೆಗಳು, ಸಾಮಾನ್ಯವಾಗಿ, ಅತೀವ ದುಃಖವನ್ನುಂಟುಮಾಡುತ್ತವೆ.

ಮುಂದಿನ ಪ್ರಶ್ನೆ ಎಂದರೆ, ಬೇರೆಲ್ಲಾ ರೀತಿಯಿಂದಲೂ ಆದರ್ಶವಾಗಿರುವ ಜೀವನವನ್ನು ಹಾಳುಮಾಡುವ ಇಂತಹ ಅಹಿತಕರ ಸನ್ನಿವೇಶಗಳನ್ನು ನಿಭಾಯಿಸುವುದು ಹೇಗೆ? ಅತ್ಯಂತ ಸುಂದರವಾದ ಜೀವನದಲ್ಲಿಯೂ ಇಂತಹ ಸಂದರ್ಭಗಳು ಬಂದೇ ಬರುತ್ತವೆ. ನೀವು ಅನುಭವಿಸುತ್ತಿರುವ ದುಃಖಕ್ಕೆ ನೀವು ದ್ವೇಷದಿಂದ ಪ್ರತಿಕ್ರಿಯಿಸುತ್ತೀರೋ ಅಥವಾ ಸಮತೆ ಮತ್ತು ಸಮತೋಲನದಿಂದ ವರ್ತಿಸುತ್ತೀರೋ? ನಿಮ್ಮ ಸಂತೋಷವು ಮರಳಿ ಬರಲೆಂದು ಹಂಬಲಿಸುತ್ತೀರಾ?

ಅಲ್ಲದೆ, ಸಂತೋಷಕ್ಕೆ ಮತ್ತು ಎಲ್ಲವೂ ಯಾವಾಗಲೂ ನಿಮ್ಮಿಚ್ಛೆಯಂತೆಯೇ ಆಗಬೇಕು ಎಂಬ ಗೀಳಿಗೆ ನೀವು ಅಂಟಿಕೊಂಡಿದ್ದರೆ, ನಿಮ್ಮಿಚ್ಛೆಯಂತೆ ಕೆಲಸಗಳು ನಡೆಯದಿದ್ದಾಗ ದುಃಖವು ಇನ್ನೂ ಜಾಸ್ತಿಯಾಗುತ್ತದೆ. ವಾಸ್ತವವಾಗಿ, ಅದು ಸಹಿಸಲಸಾಧ್ಯವಾಗುತ್ತದೆ. ನಿರಾಶೆಯ ಮತ್ತು ಖಿನ್ನತೆಯ ಈ ಸನ್ನಿವೇಶಗಳನ್ನು ನಿಭಾಯಿಸಲು, ಅನೇಕ ಬಾರಿ ಇದು ನಮ್ಮನ್ನು ಮದ್ಯಪಾನವನ್ನು ಆಶ್ರಯಿಸುವಂತೆ ಮತ್ತು ಜೀವನದಲ್ಲಿ ಮುಂದೆ ಸಾಗಲು ಅವಶ್ಯಕವಾಗಿ ಬೇಕಾದ ವಿಶ್ರಾಂತಿ ಪಡೆಯಲು ನಿದ್ರೆ ಮಾತ್ರೆಗಳ ಮೊರೆಹೋಗುವಂತೆ ಮಾಡುತ್ತದೆ. ಆದರೆ, ನಮ್ಮ ಸಂಪತ್ತು, ಅಧಿಕಾರ ಮತ್ತು ಅಂತಸ್ತಿನ ಕಾರಣದಿಂದ ನಾವು ಮಹೋನ್ನತ ಸಂತೋಷದಲ್ಲಿದ್ದೇವೆ ಎಂದು ಹೊರ ಜಗತ್ತಿಗೆ ಮತ್ತು ನಮಗೆ ನಾವೇ ಯಾವಾಗಲೂ ಹೇಳಿಕೊಳ್ಳುತ್ತೇವೆ.

ನಾನು ಒಂದು ವ್ಯಾಪಾರಸ್ಥ ಕುಟುಂಬದಿಂದ ಬಂದವನು ಮತ್ತು ಬಹಳ ಚಿಕ್ಕ ವಯಸ್ಸಿನಲ್ಲಿಯೇ ನಾನು ಒಬ್ಬ ಉದ್ಯಮಿ ಮತ್ತು ವ್ಯಾಪಾರಸ್ಥನಾಗಿದ್ದೆ. ನಾನು ಸಕ್ಕರೆ ಕಾರ್ಖಾನೆಗಳನ್ನು, ಹತ್ತಿ ಮತ್ತು ಉಣ್ಣೆ ಗಿರಣಿಗಳನ್ನು ಕಟ್ಟಿದೆ ಮತ್ತು ಕಛೇರಿಗಳ ಜೊತೆಗೆ ಆಮದು ಮತ್ತು ರಫ್ತು ಸಂಸ್ಥೆಗಳನ್ನು ವಿಶ್ವದಾದ್ಯಂತ ಸ್ಥಾಪಿಸಿದೆ. ಆ ಮೂಲಕ ನಾನು ಅಪಾರ ಹಣ ಸಂಪಾದಿಸಿದೆ. ಆದಾಗ್ಯೂ, ನಾನು ನನ್ನ ವ್ಯಾಪಾರದಲ್ಲಿನ ಮತ್ತು ವೈಯಕ್ತಿಕ ಬದುಕಿನ ಘಟನೆಗಳಿಗೆ ಆ ದಿನಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಿದ್ದೆ ಎಂಬುದು ಸ್ಪಷ್ಟವಾಗಿ ನೆನಪಿದೆ. ವ್ಯಾಪಾರದ ಒಂದು ವಹಿವಾಟಿನಲ್ಲಿ ನಾನು ವಿಫಲನಾದ ದಿನ, ಹಾಸಿಗೆಯ ಮೇಲೆ ಮಲಗಿ, ಗಂಟೆಗಟ್ಟಲೆ ಎಚ್ಚರದಿಂದಿದ್ದು, ಎಲ್ಲಿ ತಪ್ಪಾಯಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೆ ಮತ್ತು ಮುಂದಿನ ಸಾರಿ ನಾನು ಏನು ಮಾಡಬೇಕು ಎಂಬುದರ ಬಗ್ಗೆ ಆಲೋಚಿಸುತ್ತಿದ್ದೆ. ನಾನು ದೊಡ್ಡ ಯಶಸ್ಸನ್ನು ಸಾಧಿಸಿದ ದಿನವೂ, ಹಾಸಿಗೆಯ ಮೇಲೆ ಮಲಗಿ, ಎಚ್ಚರದಿಂದಿದ್ದು ನನ್ನ ಸಾಧನೆಯನ್ನು ಆಸ್ವಾದಿಸುತ್ತಿದ್ದೆ. ನಾನು ಯಶಸ್ಸನ್ನು ಅನುಭವಿಸಿದಾಗ, ಅದು ಸಂತೋಷವೂ ಆಗಿರಲಿಲ್ಲ ಮತ್ತು ಮನಃಶಾಂತಿಯೂ ಆಗಿರಲಿಲ್ಲ. ಶಾಂತಿಯು ಸಂತೋಷದ ಜೊತೆ ಬಹಳ ಹತ್ತಿರದ ಸಂಬಂಧ ಹೊಂದಿದೆ ಎಂಬುದನ್ನು ಕಂಡುಕೊಂಡೆ ಮತ್ತು, ನನ್ನ ಹಣ ಮತ್ತು ಸಮುದಾಯದ ಮುಖಂಡನಾಗಿ ಹೊಂದಿದ್ದ ಅಂತಸ್ತು ಇದ್ದಾಗ್ಯೂ, ಶಾಂತಿ ಮತ್ತು ಸಂತೋಷ ಇವೆರಡೂ ಆಗಿಂದಾಗ್ಗೆ ನನ್ನಲ್ಲಿರುತ್ತಿರಲಿಲ್ಲ.

ಈ ವಿಷಯಕ್ಕೆ ಸಂಬಂಧಿಸಿದ ಮತ್ತು ನನಗಿಷ್ಟವಾದ ಒಂದು ಕವನ ನನಗೆ ನೆನಪಿದೆ:

ಒಂದು ಮಧುರವಾದ ಹಾಡಿನ ರೀತಿ ಜೀವನ ಸಾಗುತ್ತಿದ್ದಾಗ, ಸಂತೋಷವಾಗಿರುವುದು ಬಹಳ ಸುಲಭ;
ಆದರೆ ಎಲ್ಲವೂ ಸಂಪೂರ್ಣ ತಲೆಕೆಳಗಾದಾಗ,
ಮುಗುಳು ನಗುವ ವ್ಯಕ್ತಿಯೇ ಒಬ್ಬ ಯೋಗ್ಯನಾದ ವ್ಯಕ್ತಿ.

ಸಂಪೂರ್ಣ ತಪ್ಪಾಗುವ ಈ ಸಂದರ್ಭಗಳನ್ನು ನಮ್ಮಲ್ಲಿನ ಪ್ರತಿಯೊಬ್ಬರೂ ನಮ್ಮ ಸಂಪತ್ತು, ಅಧಿಕಾರ ಮತ್ತು ಪ್ರತಿಷ್ಠೆಗೆ ಗಮನ ಕೊಡದೆ ಹೇಗೆ ನಿಭಾಯಿಸುತ್ತೇವೆ ಎಂಬುದೇ ‘ಸುಖದ ಅರ್ಥ’ದ ಪ್ರಧಾನ ಅಂಶ.

ಪ್ರತಿಯೊಬ್ಬ ವ್ಯಕ್ತಿಯೂ ಸಂತೋಷದ ಜೀವನ ನಡೆಸ ಬಯಸುತ್ತಾನೆ. ಇದು ಮಾನವನ ಒಂದು ಮೂಲಭೂತ ಅವಶ್ಯಕತೆ. ಇದಕ್ಕಾಗಿ ವ್ಯಕ್ತಿಯು ನಿಜವಾದ ಸಂತೋಷವನ್ನು ಅನುಭವಿಸಬೇಕು. ಹಣ ಮತ್ತು ಅಧಿಕಾರ ಹೊಂದಿ, ಇಂದ್ರಿಯ ಸುಖಗಳಲ್ಲಿ ತೊಡಗಿ, ವ್ಯಕ್ತಿಯು ಅನುಭವಿಸುವ, ಸುಖ ಎಂದು ಕರೆಯುವ, ಈ ಸುಖವು ನಿಜವಾದ ಸುಖವಲ್ಲ. ಅದು ಬಹಳ ದುರ್ಬಲವಾದುದು, ಅಸ್ಥಿರವಾದುದು ಮತ್ತು ಕ್ಷಣಿಕವಾದುದು. ನಿಜವಾದ ಮತ್ತು ಬಹಳ ಕಾಲ ಸ್ಥಿರವಾಗಿರುವ ಸಂತೋಷಕ್ಕಾಗಿ ವ್ಯಕ್ತಿಯು ತನ್ನ ಅಂತರಾಳಕ್ಕೆ ಪ್ರಯಾಣಿಸಬೇಕು ಮತ್ತು ಮನಸ್ಸಿನ ಆಳದಲ್ಲಿ ಸಂಗ್ರಹವಾಗಿರುವ ಎಲ್ಲಾ ಅಸಂತೋಷವನ್ನು ನಾಶಮಾಡಬೇಕು. ಮನಸ್ಸಿನ ಆಳದಲ್ಲಿ ದುಃಖವಿರುವ ತನಕ, ದುಃಖದ ಉತ್ಪತ್ತಿ ಆಗುತ್ತಿರುವ ತನಕ ಅದರ ಸಂವರ್ಧನೆಯಾಗುವುದಲ್ಲದೇ ಸಂತೋಷವನ್ನು ಅನುಭವಿಸಲು ಮೇಲ್ಮಟ್ಟದ ಮನಸ್ಸಿನಲ್ಲಿ ಮಾಡುವ ಎಲ್ಲಾ ಪ್ರಯತ್ನಗಳೂ ವ್ಯರ್ಥ ಎಂಬುದು ಸಾಬೀತಾಗುತ್ತದೆ.

ಕೋಪ, ದ್ವೇಷ, ದುರ್ಭಾವನೆ ಮತ್ತು ಕಡು ಹಗೆತನದಂತಹ ನಕಾರಾತ್ಮಕತೆಗಳನ್ನು ಎಲ್ಲಿಯ ತನಕ ವ್ಯಕ್ತಿಯು ಉತ್ಪತ್ತಿ ಮಾಡಿಕೊಳ್ಳುತ್ತಿರುತ್ತಾನೊ ಅಲ್ಲಿಯ ತನಕ ಮನಸ್ಸಿನ ಆಳದಲ್ಲಿರುವ ಅಸಂತೋಷದ ಈ ಸಂಗ್ರಹವು ಗುಣಿತವಾಗುತ್ತಿರುತ್ತದೆ. ಪ್ರಕೃತಿಯ ನಿಯಮ ಹೇಗಿದೆ ಎಂದರೆ, ವ್ಯಕ್ತಿಯು ನಕಾರಾತ್ಮಕತೆಯನ್ನು ಉತ್ಪತ್ತಿ ಮಾಡಿಕೊಂಡ ತಕ್ಷಣ ಅದರ ಜೊತೆಗೇ ಅಸಂತೋಷ ಬರುತ್ತದೆ. ವ್ಯಕ್ತಿಯು ಮನಸ್ಸಿನಲ್ಲಿ ನಕಾರಾತ್ಮಕತೆಯನ್ನು ಉತ್ಪತ್ತಿ ಮಾಡಿಕೊಳ್ಳುತ್ತಿರುವಾಗ ಸುಖ ಮತ್ತು ಶಾಂತಿಯನ್ನು ಅನುಭವಿಸಲು ಸಾಧ್ಯವಿಲ್ಲ. ಬೆಳಕು ಮತ್ತು ಕತ್ತಲೆ ಒಟ್ಟಿಗೆ ಇರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಶಾಂತಿ ಮತ್ತು ನಕಾರಾತ್ಮಕತೆ ಒಟ್ಟಿಗೆ ಇರಲು ಸಾಧ್ಯವಿಲ್ಲ. ನನ್ನ ದೇಶದ ಪುರಾತನ ಕಾಲದ ಮಹಾನ್ ವಿಜ್ಞಾನಿಯು ಬೆಳಕಿಗೆ ತಂದಿರುವ ಕ್ರಮಬದ್ಧವಾದ ಒಂದು ವೈಜ್ಞಾನಿಕ ಧ್ಯಾನ ವಿಧಾನವಿದೆ(ವಿದ್ಯೆಯಿದೆ); ಅದರ ಮೂಲಕ ವ್ಯಕ್ತಿಯು, ಮನಸ್ಸು ಮತ್ತು ಶರೀರಕ್ಕೆ ಸಂಬಂಧಿಸಿದ ವಿದ್ಯಮಾನವನ್ನು ಅನುಭವದ ಮಟ್ಟದಲ್ಲಿ ಪರಿಶೋಧಿಸಬಹುದು. ಈ ಧ್ಯಾನವಿಧಾನವನ್ನು (ವಿದ್ಯೆಯನ್ನು) ವಿಪಶ್ಯನ ಎಂದು ಕರೆಯಲಾಗಿದೆ. ವಿಪಶ್ಯನ ಎಂದರೆ, ಸತ್ಯವನ್ನು ಅದು ಹೇಗಿದೆಯೋ ಹಾಗೆಯೇ ವಸ್ತುನಿಷ್ಠವಾಗಿ ಗಮನಿಸುವುದು. ತನ್ನ ಶರೀರ ರಚನೆಯಲ್ಲಿ ನಡೆಯುವ ಮನಸ್ಸು ಮತ್ತು ಶರೀರದ ಪರಸ್ಪರ ಕ್ರಿಯೆಯನ್ನು ಅನುಭವಿಸುವ ಮತ್ತು ಅರ್ಥ ಮಾಡಿಕೊಳ್ಳುವ ಸಹಜ ಶಕ್ತಿಯನ್ನು ಬೆಳೆಸಿಕೊಳ್ಳಲು ಧ್ಯಾನ ಸಾಧನೆಯು ವ್ಯಕ್ತಿಗೆ ಸಹಾಯ ಮಾಡುತ್ತದೆ.

ವಿಪಶ್ಯನ ಧ್ಯಾನದ 10 ದಿನದ ಶಿಬಿರದಲ್ಲಿ ಇತರ ಧ್ಯಾನ್ಯಾರ್ಥಿಗಳ ಜೊತೆ ಮಾತನಾಡದೆ ವ್ಯಕ್ತಿಯು ಮೌನವಾಗಿರುತ್ತಾನೆ. ಮನಸ್ಸನ್ನು ಹೆಚ್ಚು ಪ್ರಶಾಂತ ಗೊಳಿಸಲು ಮತ್ತು ಸೂಕ್ಷ್ಮ ಮಾಡಲು ಮೌನವನ್ನು ಆಚರಿಸಲಾಗುತ್ತದೆ. ಆದರೆ ಧ್ಯಾನದ ಬಗ್ಗೆ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ಆಚಾರ್ಯರೊಡನೆ ಮಾತಾಡಬಹುದು. ನಿಮಗೇನಾದರೂ ಅವಶ್ಯಕತೆಗಳಿದ್ದರೆ ಅಥವಾ ಸವಲತ್ತುಗಳ ಬಗ್ಗೆ ಏನಾದರೂ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ಮ್ಯಾನೇಜರ್ ಜೊತೆ ಮಾತಾಡಬಹುದು. ಇಲ್ಲವಾದರೆ ಮೌನವಾಗಿರಬೇಕು .

ನಿಮ್ಮ ಇಡೀ ಗಮನವನ್ನು ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ ಶಿಬಿರವು ಪ್ರಾರಂಭವಾಗುತ್ತದೆ: ಮೂಗಿನ ಹೊಳ್ಳೆಗಳಿಂದ ಒಳಹೋಗುವ ಮತ್ತು ಹೊರಹೋಗುವ ಉಸಿರಿನ ಹರಿವನ್ನು ಮತ್ತು ಅದು ಹೊಳ್ಳೆಗಳ ಮುಖಾಂತರ, ಹೊಳ್ಳೆಗಳ ಉಂಗುರುಗಳನ್ನು ದಾಟಿ ಹೋದಾಗ , ಹೊಳ್ಳೆಗಳ ಕೆಳಭಾಗದ ಮತ್ತು ಮೇಲ್ತುಟಿಯ ಮೇಲ್ಭಾಗದ ಜಾಗದ ಮೇಲೆ ಬರುವ ದೈಹಿಕ ಸಂವೇದನೆಗಳನ್ನು ಗಮನಿಸುವುದು. ಈ ಅಭ್ಯಾಸವನ್ನು ನೀವು ಮೊದಲು ಪ್ರಾರಂಭಿಸಿದಾಗ ಮನಸ್ಸು ಬಹುತೇಕ ತಕ್ಷಣವೇ ಆಲೋಚನೆಗಳಲ್ಲಿ, ಕಲ್ಪನೆಗಳಲ್ಲಿ ನೆನಪುಗಳಲ್ಲಿ ಅಲೆದಾಡುತ್ತದೆ. ಅದು ಅಲೆದಾಡಿರುವುದು ಗಮನಕ್ಕೆ ಬಂದ ಕೂಡಲೇ ನಿಧಾನವಾಗಿ ಅದನ್ನು ಉಸಿರಿನ ಅರಿವಿಗೆ ಮರಳಿತನ್ನಿ. ಮುಂದಿನ ಮೂರು ದಿನಗಳಲ್ಲಿ ನಿಧಾನವಾಗಿ ಮನಸ್ಸು ಸ್ಥಿರಗೊಳ್ಳುತ್ತದೆ ಮತ್ತು ಹೆಚ್ಚು ಏಕಾಗ್ರಗೊಳ್ಳುತ್ತದೆ. ನಾಲ್ಕನೇ ದಿನ ಬಹುತೇಕ ವಿದ್ಯಾರ್ಥಿಗಳಿಗೆ ಮನಸ್ಸು ಹಿಂದಿಗಿಂತ ಹೆಚ್ಚು ಏಕಾಗ್ರಗೊಂಡಿರುವುದು ಅನುಭವಕ್ಕೆ ಬರುತ್ತದೆ ಮತ್ತು ಎಲ್ಲೂ ಅಲೆದಾಡದೆ ಕೇವಲ ಉಸಿರಿನ ಮೇಲೆ 1,2,3, ಅಥವಾ 5 ನಿಮಿಷಗಳವರೆಗೆ ನಿರಂತರವಾಗಿ ನಿಲ್ಲುತ್ತದೆ.

ಶಿಬಿರದ ಮೊದಲ ಕೆಲವು ದಿನಗಳಲ್ಲಿ ಮತ್ತೊಂದು ನಡೆಯುತ್ತದೆ. ಅದಂದರೆ ಮನಸ್ಸು ಹಿಂದೆಂದಿಗಿಂತಲೂ ಬಹಳ ಹೆಚ್ಚು ಸೂಕ್ಷ್ಮವಾಗುತ್ತದೆ. ಮೌನ ಮತ್ತು ಉಸಿರಿನ ಮೇಲಿನ ನಿರಂತರ ಧ್ಯಾನವು, ಮನಸ್ಸು ಹಿಂದೆಂದಿಗಿಂತಲೂ ಹೆಚ್ಚು ಸೂಕ್ಷ್ಮಮಟ್ಟದಲ್ಲಿ ಶರೀರದ ಸಂವೇದನೆಗಳನ್ನು ಅರಿಯಲು ಪ್ರಾರಂಭಿಸುವಂತೆ ಮಾಡುತ್ತದೆ. ಮೊದಲು, ಮೂಗಿನ ಹೊಳ್ಳೆಗಳ ಸುತ್ತಲಿನ ಪ್ರದೇಶದಲ್ಲಿ ಸೂಕ್ಷ್ಮ ಕಂಪನಗಳು, ತರಂಗಗಳು ಮತ್ತು ಇತರೆ ಸಂವೇದನೆಗಳು ಅನುಭವಕ್ಕೆ ಬರುತ್ತವೆ.

ಶಿಬಿರದ ನಾಲ್ಕನೆಯ ದಿನದ ಮಧ್ಯಾಹ್ನ ಧ್ಯಾನದ ವಸ್ತುವು ಉಸಿರಾಟವನ್ನು ಅರಿಯುವುದರಿಂದ ಶರೀರದಲ್ಲಿನ ಸಂವೇದನೆಗಳನ್ನು ಗಮನಿಸುವುದಕ್ಕೆ ಬದಲಾಗುತ್ತದೆ.ತಲೆಯ ನೆತ್ತಿಯಿಂದ ಆರಂಭಿಸಿ ಗಮನವನ್ನು ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಕೆಳಗಿಳಿಸುತ್ತಾ , ಒಮ್ಮೆಗೆ ಒಂದು ಭಾಗವನ್ನು ಗಮನಿಸುತ್ತಾ, ಇಡೀ ಶರೀರದಲ್ಲಿ ಹರಿಸಲಾಗುವುದು. ಹೀಗೆ ಗಮನ ಹರಿಸುವಾಗ ಎದುರಾಗುವ ಪ್ರತಿಯೊಂದು ಸಂವೇದನೆಯನ್ನು ಗಮನಿಸುತ್ತಾ ಯಾವುದೇ ಸಂವೇದನೆಗೆ ಪ್ರತಿಕ್ರಿಯೆ ಮಾಡದಿರುವಂತೆ ಮನಸ್ಸನ್ನು ತರಬೇತಿಗೊಳಿಸಲಾಗುವುದು. ನೋವು ಮುಂತಾದ ಅಹಿತಕರ ಸಂವೇಧನೆಗಳಿಗೆ ಅವುಗಳು ಹೊರಟು ಹೋಗಲಿ ಎಂದು ದ್ವೇಷದಿಂದ ಪ್ರತಿಕ್ರಿಯಿಸದಿರುವುದು ಮತ್ತು ಬಹಳ ಹಿತಕರವಾದ, ಆನಂದದಾಯಕ ಸಂವೇದನೆಗಳಿಗೆ ಅವು ಹೋಗದಿರಲಿ ಎಂದು ರಾಗದಿಂದ ಪ್ರತಿಕ್ರಿಯಿಸದಿರುವುದು ಮತ್ತು ಅವುಗಳಿಗೆ ಅಂಟಿಕೊಳ್ಳದಿರುವುದು. ದೇಹದಲ್ಲಿರುವ ಎಲ್ಲಾ ಭೌತಿಕ ಸಂವೇದನೆಗಳನ್ನು ಯಾವುದೇ ಪ್ರತಿಕ್ರಿಯೆ ಮಾಡದೆ ಸಮತೆಯಿಂದ ಗಮನಿಸುವಂತೆ ಮನಸ್ಸಿಗೆ ತರಬೇತಿ ನೀಡುವುದು

ನಮ್ಮ ಹಿಂದಿನ ಅನುಭವಗಳಲ್ಲಿ, ಪ್ರತಿ ಬಾರಿ ಏನನ್ನಾದರೂ ನಾವು ಅನುಭವಿಸಿದಾಗ, ಆ ಅನುಭವದ ಜೊತೆಗೆ ಶರೀರದಲ್ಲಿ ಯಾವುದಾದರೂ ಸಂವೇದನೆಯಿರುತ್ತಿತ್ತು ಮತ್ತು ಮನಸ್ಸು ಆ ಸಂವೇದನೆಗೆ ಇಷ್ಟದಿಂದ ಅಥವಾ ದ್ವೇಷದಿಂದ ಪ್ರತಿಕ್ರಿಯೆ ಮಾಡುತ್ತಿತ್ತು

ವಿಪಶ್ಯನ ಧ್ಯಾನದ ಸಮಯದಲ್ಲಿ ಶಾರೀರಿಕ ಸಂವೇದನೆಗಳನ್ನು ಪ್ರತಿಕ್ರಿಯೆ ಮಾಡದೆ ಗಮನಿಸುವುದು ಅಸಾಧಾರಣವಾದ ಪರಿಣಾಮ ಉಂಟುಮಾಡುತ್ತದೆ. ಕೋಪ, ಹಗೆತನ, ದುರ್ಭಾವನೆ, ಲೈಂಗಿಕಾಸಕ್ತಿ ಮುಂತಾದ ಶೇಖರಗೊಂಡ ಹಳೆಯ ರೂಢಿಗತ ಅಭ್ಯಾಸಗಳು ಮನಸ್ಸಿನ ಮೇಲ್ಪದರಕ್ಕೆ ಬಂದು ಸಂವೇದನೆಗಳಾಗಿ ಪ್ರಕಟಗೊಳ್ಳಲು ಇದು ಕಾರಣವಾಗುತ್ತದೆ. ಈ ಸಂವೇದನೆಗಳನ್ನು ಯಾವುದೇ ಪ್ರತಿಕ್ರಿಯೆ ಇಲ್ಲದೆ ಗಮನಿಸುವುದು, ಪದರ ಪದರವಾಗಿ ಅವುಗಳು ಹೊರಟು ಹೋಗುವುದಕ್ಕೆ ಕಾರಣವಾಗುತ್ತದೆ. ಆಗ ನಿಮ್ಮ ಮನಸ್ಸು ಈ ಅನೇಕ ರೂಢಿಗತ ಅಭ್ಯಾಸಗಳಿಂದ ಮುಕ್ತವಾಗುತ್ತದೆ ಮತ್ತು ಜೀವನದ ಅನುಭವಗಳನ್ನು ಹಿಂದಿನ ಅನುಭವಗಳ ಹಿನ್ನೆಲೆ ಇಲ್ಲದೆ ವ್ಯವಹರಿಸಲು ಶಕ್ತವಾಗುತ್ತದೆ.

ವಿಪಶ್ಯನದ ಇಡೀ ಉದ್ದೇಶವು ಮನಸ್ಸನ್ನು ಅದರ ರೂಢಿಗತ ಅಭ್ಯಾಸಗಳಿಂದ ಮುಕ್ತಗೊಳಿಸುವುದು. ಇದರಿಂದ ವ್ಯಕ್ತಿಯು ಎಲ್ಲರ ಬಗೆಗೂ ಪ್ರೀತಿ, ಕರುಣೆ ಮತ್ತು ಸದ್ಭಾವನೆಯಿಂದ ತುಂಬಿದ ಸಂತೋಷದ ಜೀವನ ನಡೆಸಬಹುದು.

ಹಳೆಯ ರೂಢಿಗತ ಅಭ್ಯಾಸಗಳನ್ನು ಮನಸ್ಸಿನಿಂದ ತೆಗೆದುಹಾಕುವುದು ಮತ್ತು ಪ್ರತಿಯೊಂದೂ ಅನುಭವದ ಜೊತೆ ಹೆಚ್ಚು ಸಮತೆಯಿಂದಿರುವಂತೆ ಮನಸ್ಸನ್ನು ತರಬೇತಿಗೊಳಿಸುವುದು, ನಿಜವಾದ ಸುಖವನ್ನು ಅನುಭವಿಸಲು ವ್ಯಕ್ತಿಯನ್ನು ಸಶಕ್ತಗೊಳಿಸುವ ಕಡೆಗಿನ ಮೊದಲ ಹೆಜ್ಜೆ.